ಕ್ಯಾಪರಿಡೇಸೀ

ದ್ವಿದಳ ಸಸ್ಯವರ್ಗದ ರಿಯಡೇಲಿಸ್ ಗಣಕ್ಕೆ ಸೇರಿದ ಒಂದು ಕುಟುಂಬ. ಸುಮಾರು 46 ಜಾತಿ ಮತ್ತು 700 ಪ್ರಭೇದಗಳನ್ನೊಳಗೊಂಡಿದೆ. ಬಹುಪಾಲು ಪ್ರಭೇದಗಳು ಉಷ್ಣ ಹಾಗೂ ಸಮಶೀತೋಷ್ಣವಲಯಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಹೆಚ್ಚಿನ ಬಗೆಗಳು ಪೊದೆಸಸ್ಯ ಇಲ್ಲವೇ ಮರಗಳು (ಉದಾ:ಕಡಬ, ಕ್ರಟೇವ ಇತ್ಯಾದಿ). ಅಪೂರ್ವವಾಗಿ ಮೂಲಿಕೆ ಸಸ್ಯಗಳೂ ಇದರಲ್ಲಿ ಸೇರಿವೆ (ಉದಾ: ಗೈನಾಂಡ್ರಾಪ್ಸಿಸ್, ಇತ್ಯಾದಿ). ಈ ಕುಟುಂಬದ ಕೆಲವು ಮುಖ್ಯ ಅಂಗಗಳ ಲಕ್ಷಣಗಳು ಈ ರೀತಿ ಇವೆ. ಎಲೆಗಳು ಸರಳವಾಗಿರಬಹುದು. ಇಲ್ಲವೇ ಹಸ್ತಾಕಾರವಾಗಿ ವಿಭಜಿತವಾಗಿರಬಹುದು. ಎಲೆಗಳ ಜೋಡಣೆ ಪರ್ಯಾಯ. ಕೆಲವು ಪ್ರಭೇದಗಳು ವೃಂತಪರ್ಣಗಳಿವೆ (ಇವು ಮುಳ್ಳುಗಳಾಗಿ ಪರಿವರ್ತಿತವಾಗಿರಬಹುದು). ಹೂಗೊಂಚಲು ಹೆಚ್ಚಾಗಿ ರೆಸೀಮ್ ಮಾದರಿಯದು. ಹೂಗಳು ದ್ವಿಲಿಂಗಿಗಳು (ಪೊಡೆಂಡ್ರೊಗೈನ್ ಎಂಬ ಗಿಡದಲ್ಲಿ ಮಾತ್ರ ಏಕಲಿಂಗಿ ಹೂಗಳನ್ನು ಕಾಣಬಹುದು); ಆರೀಯ ಸಮಾಂಗತೆಯನ್ನು ಪ್ರದರ್ಶಿಸುತ್ತವೆ. ಒಮ್ಮೊಮ್ಮೆ ಉಭಯಪಾಶ್ರ್ವಸಮಾಂಗತೆಯೂ ಇರಬಹುದು(ಉದಾ:ಟೀರೊಪೆಟಲಮ್). ಹೂಗಳಿಗೆ ಉಪಪತ್ರಗಳು, 4 ಪುಷ್ಪ ಪತ್ರಗಳು, 4 ದಳಗಳು, 4 ಕೇಸರಗಳು ಮತ್ತು 2 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಪುಷ್ಪಪತ್ರಗಳು ಬಿಡಿಬಿಡಯಾಗಿವೆ. ಎಂಬ್ಲಿಂಜಿಯ ಎಂಬ ಜಾತಿಯಲ್ಲಿ ಮಾತ್ರ ಸಂಯುಕ್ತ ಮಾದರಿಯ ಪತ್ರಗಳಿವೆ.

ದಳಗಳೂ ಬಿಡಿಬಿಡಿಯಾಗಿದ್ದು ಒಂದೊಂದರಲ್ಲಿ ಕ್ಲಾ ಮತ್ತು ಲಿಂಬ್‍ಗಳೆಂಬ ಎರಡು ಭಾಗಗಳನ್ನು ಗುರುತಿಸಬಹುದು. ಎಂಬ್ಲಿಂಜಿಯದಲ್ಲಿ ದಳಗಳು ಸಂಯುಕ್ತ ಮಾದರಿಯವು. ಸ್ಟೈಕ್ಸಿಸ್ ಎಂಬ ಪ್ರಭೇದದಲ್ಲಿ ದಳಗಳೇ ಇಲ್ಲ. ಕೇಸರಗಳ ಸಂಖ್ಯೆ 6 ಇದ್ದರೆ ಅವುಗಳಲ್ಲಿ ನಾಲ್ಕು ಉಳಿದೆರಡಕ್ಕಿಂತ ದೊಡ್ಡವು. ಈ ಸ್ಥಿತಿಯನ್ನು ಟೆಟ್ರಡೈನಮಸ್ ಎನ್ನಲಾಗುತ್ತದೆ. ಕೆಪ್ಪಾರಿಸ್ ಗಿಡದಲ್ಲಿ ಅಸಂಖ್ಯಾತ ಕೇಸರಗಳಿವೆ. ದಳಗಳಿಗೂ ಕೇಸರಗಳಿಗೂ ಮಧ್ಯೆ ಇರುವ ಹೂವಿನ ಅಕ್ಷಭಾಗ ಉದ್ದಕ್ಕೆ ಕೊಳವೆಯಂತೆ ಬೆಳೆದಿರುವುದು ಕ್ಯಾಪರಿಡೇಸೀ ಕುಟುಂಬದ ವಿಶೇಷಲಕ್ಷಣ. ಹೀಗೆ ಉಂಟಾಗಿರುವ ಕೊಳವೆಯ ಮೇಲೆ ಕೇಸರಗಳೂ ಅಂಡಾಶಯವೂ ಅಂಟಿರುತ್ತವೆ. ಈ ಕೊಳವೆಗೆ ಗೈನ್ಯಾಂಡ್ರೋ ಫೋರ್ ಎಂದು ಹೆಸರು. ಕೆಲವೊಮ್ಮೆ ಕೇಸರಗಳಿಗೂ ಅಂಡಾಶಯಕ್ಕೂ ನಡುವಿನಭಾಗ ಮಾತ್ರ ಕೊಳವೆಯಂತೆ ಬೆಳೆದಿರುವುದುಂಟು. ಇದಕ್ಕೆ ಗೈನೋಫೋರ್ ಎಂದು ಹೆಸರು.

ಅಂಡಾಶಯದಲ್ಲಿ ಎರಡು ಕೋಣೆಗಳೂ ಒಂದೊಂದರಲ್ಲಿ ಹಲವಾರು ಅಂಡಕಗಳೂ ಇವೆ. ಗರ್ಭಧಾರಣೆಯ ಅನಂತರ ಅಂಡಾಶಯದ ಒಳಗೋಡೆಯಿಂದ ಅಕ್ಷಭಾಗದೆಡೆಗೆ ಭಿತ್ತಿಗಳು ಬೆಳೆದು ಕೋಣೆಗಳ ಸಂಖ್ಯೆ ಹೆಚ್ಚಬಹುದು. ಫಲ ಸಂಪುಟ, ಸಿಲಿಕ್ವ ಇಲ್ಲವೆ ಬೆರೆ-ಮುಂತಾದ ಮಾದರಿಗಳದ್ದಾಗಿದೆ.

ಕೆಪ್ಪಾರಿಡೇಸೀ ಕುಟುಂಬಕ್ಕೆ ಸೇರಿದ ಕೆಲವು ಸಸ್ಯಗಳ ಆರ್ಥಿಕ ಪ್ರಾಮುಖ್ಯ ಈ ರೀತಿ ಇದೆ-1.ಕೆಪ್ಪಾರಿಸ್ ಏಫಿಲ-ಇದರ ತೊಗಟೆಯ ಕಷಾಯವನ್ನು ಸಂಧಿವಾತ, ಕೆಮ್ಮು ಮುಂತಾದ ರೋಗಗಳಿಗೆ ಬಳಸುತ್ತಾರೆ. 2. ಕ್ರಟೇವ ರಿಲಿಜಿಯೋಸ-ಎಲೆಗಳು ಶಕ್ತಿವರ್ಧಕ, ಬೇರು ಮತ್ತು ತೊಗಟೆಗಳಿಗೆ ವಿರೇಚಕ ಗುಣ ಇದೆ. 3. ಗೈನಾಂಡ್ರಾಪ್ರ್ಸಿಸ್ ಪೆಂಟಫಿಲ-ಬೀಜ ಎಲೆ ಮತ್ತು ಬೇರುಗಳನ್ನು ಜೀರ್ಣಕಾರಿಗಳಾಗಿ ಉಪಯೋಗಿಸುವುದುಂಟು. ಬೀಜಗಳನ್ನು ಸಾಸುವೆಯ ಬದಲಿಗೆ ಬಳಸುವುದಿದೆ. ಈ ಗಿಡದ ಕೆಲವು ಬಗೆಗಳು ಉದ್ಯಾನಪ್ರಾಮುಖ್ಯವನ್ನು ಪಡೆದಿವೆ. 	   							 (ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ